ಗುರುವಾರ, ನವೆಂಬರ್ 20, 2014

ಹಸಿವು

ತುಮಕೂರಿನ ಬಸ್ ಸ್ಟ್ಯಾಂಡ್ ಇವತ್ತು ಬದಲಾಗಿದೆ. ಅಲ್ಲಿ ನಿಂತಾಗಲೆಲ್ಲ ಹಳೆಯದೊಂದು ನೆನಪು ಅವನನ್ನ ಕಾಡುತ್ತಲೇ ಇರುತ್ತದೆ. ಅದವನ ಹೈಸ್ಕೂಲಿನ ಅದುಮಿಟ್ಟ. ದಿನಗಳು. ಒಂದೇ ಪ್ಯಾಂಟಿನ, ಹೊಲಿಗೆ ಬಿದ್ದು ತ್ಯಾಪೆ ಹಾಕಿಸಿಕೊಂಡ ಒಂಟಿ ಷರ್ಟಿನ ಸಿರಿವಂತಿಕೆಯ ಬಾಲ್ಯ. ಹೈಸ್ಕೂಲೂ ಹೆಚ್ಚುಕಮ್ಮಿ ಬಾಲ್ಯಾನೇ ಅಲ್ವಾ? ಅವತ್ತು ಮುಂಜಾನೆ ಅವನಮ್ಮ ಹುರುಳಿಕಾಳು ಬೇಯಿಸಿದ ಸಪ್ನೀರು ಕೊಟ್ಟಿದ್ದಳು, ಕಾಳನೇ ತಿಂದು ಬಂದಿದ್ದ. ಜೇಬಲ್ಲಿ ಹದಿನಾಲ್ಕೇ ರೂಪಾಯಿ ಇತ್ತು. ಆ ದಿನ ಅವನು ಚರ್ಚಾಸ್ಪರ್ದೆಯಲ್ಲಿ ಭಾಗವಹಿಸುವವನಿದ್ದ. ಗೂಳೂರಿನ ಶಾಲೆಯಲ್ಲಿ ನಡೆದ ಚರ್ಚಾಸ್ಪರ್ಧೆಗೆ ಸಿಟಿಯ ವಿದ್ಯಾರ್ಥಿಗಳು ಬಂದಿದ್ರು. ಗೆಲ್ಲುವ ಉತ್ಕಟತೆಯಿಂದ್ಲೇ ವಾದ ಮಂಡಿಸಿದ್ದವನಿಗೆ ಒಂದು ಪಾರಿತೋಷಕದ ಜೊತೆ ಪ್ರಮಾಣಪತ್ರವೂ ಸಿಕ್ಕಿತ್ತು. ಅಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿರಲಿಲ್ಲ. ತಳಸೀಯುತ್ತಿದ್ದ ಹೊಟ್ಟೆಗೆ ಪ್ರಶಸ್ತಿಯ ಖುಷಿ ಯಾತಕ್ಕೆ ಬೇಕು. ತುಮಕೂರಿನ ಬಸ್ ಸ್ಟ್ಯಾಂಡ್ ನಲ್ಲಿ ತರಹೇವಾರಿ ವಾಸನೆ ಬರ್ತಿತ್ತು. ಏನೇನೋ ಮಾರ್ತಿದ್ರು. ಕೊಂಡು ತಿಂದ್ರೆ ಇರೋ ಕಾಸು ಖಾಲಿಯಾಗಿ ಬಸ್ ಚಾರ್ಚ್ ಇಲ್ಲದಂತಾಗುತ್ತೆ. ಊರಿಗೆ ಸೀದಾ ಹೋಗೋ ಬಸ್ ಗೆ ಕಾದು ಕೂತವನ ಕೆಟ್ಟಸಿವು ಅಳಿಸಿಬಿಟ್ಟಿತ್ತು. ಅವತ್ತು ಸಿಕ್ಕ ಪ್ರಮಾಣ ಪತ್ರದ ಮೇಲೂ ಒಂದೆರಡು ಹನಿ ಬಿದ್ದಿದ್ದವು. ನಿಜವಾಗ್ಲೂ ಅವತ್ತು ಆ ಹುಡುಗ ವಿಜಯಿಯಾಗಿದ್ದನಾ? ಗೊತ್ತಿಲ್ಲ.
ಆದರೆ ಹಸಿವನ್ನ ಗೆಲ್ಲಬೇಕೆಂಬ ಅಮ್ಮನ ಮಾತು ನೆನಪಾಗಿ, ದವಡೆ ಬಿಗಿದು ಬಸ್ ಹತ್ತಿ ಕೂತ. ಕರುಳಿಗೆ ಸಿಕ್ಕ. ಸಂದೇಶಕ್ಕೆ ಯಾರದ್ದೋ ಹೊಲದಲ್ಲಿ ಅವನಮ್ಮ ಬಿಕ್ಕಿದ್ದಳು. ಎದುರು ಮನೆಯವರಿಂದ ಪಾವು ಅಕ್ಕಿ ಸಾಲ ಮಾಡಿ ಅನ್ನ ಮಾಡಿದ್ದಳು. ಅಷ್ಟು ದೂರದಲ್ಲಿ ಸಿಕ್ಕ ಪ್ರಶಸ್ತಿಗಿಂತ, ಹೆತ್ತವಳ ತುತ್ತನ್ನ ಮಿಗಿಲೆನಿಸಿತ್ತು. ಹಸಿವಿನ ಸಂಕಟವನ್ನ ಅವನಿಗೆ ತುಮಕೂರಿನ ಬಸ್ ಸ್ಟ್ಯಾಂಡ್ ಈಗಲೂ ನೆನಪಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ